WEL COME TO KANAKAGIRI UTSAV 2013

ಗುರುವಾರ, ಜನವರಿ 31, 2013

ಕೆಲವು ಅಪರೂಪದ ಚಿತ್ರಗಳು


ಕೃಪೆ : ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಕನಕಗಿರಿಯ ಐತಿಹಾಸಿಕ ಪಕ್ಷಿನೋಟ 4


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ 3


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ -1


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ


ಡಾ.ದುರುಗಪ್ಪ ಎಂ.ಕೆ. ಇತಿಹಾಸ ಉಪನ್ಯಾಸಕರು ಕನಕಗಿರಿ

ಉತ್ಸವದಲ್ಲಿ ಗಂಗಾವತಿ ಪ್ರಾಣೇಶ್, ಹಂಸಲೇಖ, ರಾಜೇಶ್‌ಕೃಷ್ಣನ್


ಕನಕಗಿರಿ ಉತ್ಸವ ಅಂಗವಾಗಿ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಖ್ಯಾತ ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಹಂಸಲೇಖ, ಗಂಗಾವತಿಯ ಪ್ರಾಣೇಶ್ ಮುಂತಾದ ಖ್ಯಾತ ಕಲಾವಿದರಿಂದ ವಿವಿಧ ಸಂಗೀತ, ನೃತ್ಯ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. ೦೨ ರಂದು ಸಂಜೆ ೫.೩೦ ಕ್ಕೆ ಕನಕಗಿರಿಯ ಡಿ.ಮಾರುತಿ ಬಿನ್ನಾಳ ಇವರಿಂದ ಹಿಂದೂಸ್ತಾನಿ ಸಂಗೀತ, ಗಂಗಾವತಿಯ ಸುನೀತ ರಾಮಕೃಷ್ಣ ಇವರಿಂದ ಜಾನಪದ ಸಂಗೀತ ಹಾಗೂ ಕನಕಗಿರಿಯ ಕಿರಣ್ ಬೊಂದಡೆ ಇವರಿಂದ ತಬಲಾ ಜರುಗಲಿದೆ. ಸಂಜೆ ೦೬ ರಿಂದ ೭-೩೦ ರವರೆಗೆ ಉತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಅಂದು ರಾತ್ರಿ ೭.೩೦ ರಿಂದ ೯.೦೦ ರವರೆಗೆ ಬೆಂಗಳೂರಿನ ಪ್ರಭಾತ್ ಕಲಾವಿದ ರಿಂದ ಧರ್ಮಭೂಮಿ ನೃತ್ಯ ರೂಪಕ, ನಂತರ ಬೆಂಗಳೂರಿನ ರಾಜೇಶ ಕೃಷ್ಣನ್ ಮತ್ತು ತಂಡದಿಂದ ಚಲನಚಿತ್ರಗೀತೆಗಳು, ಕೊಪ್ಪಳದ ಶಂಕ್ರಪ್ಪ ಮೋರನಾಳ ಇವರಿಂದ ಬಯಲಾಟ, ಕನಕಗಿರಿಯ ಮಲ್ಕೇಶ್ ಕೋಟೆ ಮತ್ತು ತಂಡದಿಂದ ನಾಟಕ-ರಾಜಾ ಉಡಚಪ್ಪ ನಾಯಕ ಪ್ರದರ್ಶನಗೊಳ್ಳಲಿದೆ. ಫೆ. ೦೩ ರಂದು ಸಂಜೆ ೫.೦೦ ಗಂಟೆಗೆ ಕನಕಗಿರಿಯ ಛತ್ರಪ್ಪ ತಂಬೂರಿ ಇವರಿಂದ ವಚನ ಗಾಯನ, ಗಂಗಾವತಿಯ ವೀರೇಶ ಕುಮಾರ್ ಆರ್. ಭಜಂತ್ರಿ ಇವರಿಂದ ತಬಲಾ ವಾದನ, ಯಲಬುರ್ಗಾದ ಜೀವನಸಾಬ ವಾಲಿಕಾರ ಬಿನ್ನಾಳ ಇವರಿಂದ ಲಾವಣಿ, ಕನಕಗಿರಿಯ ಕನಕಗೌಡ ಪೊಲೀಸ್ ಪಾಟೀಲ್ ಇವರಿಂದ ತತ್ವಪದ, ಗಂಗಾವತಿಯ ಕಾಳಿದಾಸ ಜಾನಪದ ಕಲಾ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಬಸಪ್ಪ ಚೌಡಕಿ ಇವರಿಂದ ಚೌಡಕಿ ಪದ, ಗಂಗಾವತಿಯ ಮಹಾಬಳೇಶ್ವರ ಲಕ್ಷ್ಮಣಗೌಡ ಇವರಿಂದ ಜಾನಪದ ಗೀತೆ, ಗಂಗಾವತಿಯ ಮಹಮ್ಮದ್ ಹುಸೇನ್ ಬಿ.ಕೇಸರಟ್ಟಿ ಇವರಿಂದ ರಂಗಗೀತೆ, ಕುಷ್ಟಗಿಯ ಶರಣಪ್ಪ ವಡಿಗೇರಿ ಹಾಗೂ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಎಸ್.ಎಸ್. ಹಿರೇಮಠ ಇವರಿಂದ ತಬಲಾ ಹಾಗೂ ಕನಕಗಿರಿಯ ಶಂಕರ ಬಿನ್ನಾಳ ಇವರಿಂದ ಹಾರ್ಮೋನಿಯಂ ಜುಗಲ್‌ಬಂದಿ, ಭೂಮಿಕಾ, ಪ್ರತಿಭಾ ಹೆಚ್.ಎಂ.ಐಶ್ವರ್ಯ ಇವರಿಂದ ಭರತನಾಟ್ಯ, ಗಂಗಾವತಿಯ ಪ್ರಾಣೇಶ ಇವರಿಂದ ಹಾಸ್ಯ ಸಂಜೆ, ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ತಂಡದಿಂದ ರಾಜಾ ಉಡಚಪ್ಪ ನಾಯಕ-ನೃತ್ಯ ರೂಪಕ, ಬೆಂಗಳೂರಿನ ಹಂಸಲೇಖ ಮತ್ತು ತಂಡದಿಂದ ಸಿನಿಮಾ ಲಾಹಿರಿ, ಕೊಪ್ಪಳ ಶಿಕ್ಷಕರ ಕಲಾವೃಂದದಿಂದ ಸಂಗೊಳ್ಳಿ ರಾಯಣ್ಣ ನಾಟಕ, ಗಂಗಾವತಿಯ ಹೆಜ್ಜೆ ಗೆಜ್ಜೆ ಜಾನಪದ ಕಲಾ ಸಾಂಸ್ಕೃತಿಕ ಗ್ರಾಮೀಣಾಭಿವೃದ್ದಿ ಸಂಘ ಇವರಿಂದ ರಕ್ತ ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.

ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ


: ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ ಫೆ.೦೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಶ್ರೀ ಕನಕರಾಯ ವೇದಿಕೆಯವರೆಗೆ ಸಾಗಿ ಬರಲಿದೆ. ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ಅವರು ನೆರವೇರಿಸುವರು. ಜಾನಪದ ಕಲಾವಾಹಿನಿ ಭಾಗವಹಿಸುವ ಕಲಾ ತಂಡಗಳ ವಿವರ ಇಂತಿದೆ. ಕೊಪ್ಪಳದ ಪ್ಯಾಟಿ ಬಸವೇಶ್ವರ ಜಾನಪದ ಕಲಾ ಸಂಘ ಇವರಿಂದ ಕರಡಿ ಮಜಲು, ಯಲಬುರ್ಗಾದ ಬೀರಲಿಂಗೇಶ್ವರ ಜನಪದ ಕಲಾ ಸಂಘದಿಂದ ಡೊಳ್ಳು ಕುಣಿತ, ಯಲಬುರ್ಗಾದ ಮಾರುತೇಶ್ವರ ಷಹನಾಹಿ ಕಲಾಮೇಳ ಇವರಿಂದ ಹಲಿಗೆ ಮಜಲು, ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ದುರ್ಗಾದೇವಿ ಹಗಲು ವೇಷ ಕಲಾ ಸಂಘದಿಂದ ಹಗಲು ವೇಷ, ಕುಷ್ಟಗಿಯ ದೇವಪ್ಪ ಭಜಂತ್ರಿ ಮತ್ತು ತಂಡದಿಂದ ಕಣಿಹಲಗೆ ವಾದನ, ಕೊಪ್ಪಳದ ಶಿವಮೂರ್ತಿ ಮೇಟಿ ಹಾಗೂ ತಂಡದಿಂದ ಕೋಲಾಟ ತಂಡ, ಬಳ್ಳಾರಿಯ ಹನುಮಂತಪ್ಪ ಹಂಪಾಪಟ್ಟಣ ಇವರಿಂದ ಕೀಲು ಕುದುರೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ಚಿತ್ರದುರ್ಗದ ಮೆಹಬೂಬ ಸುಬಾನ್ ಮತ್ತು ತಂಡದಿಂದ ಗಾರುಡಿ ಗೊಂಬೆ, ಮಂಡ್ಯದ ಕೆ.ಬಿ.ಸ್ವಾಮಿ ಮತ್ತು ತಂಡದಿಂದ ನಂದಿ ಧ್ವಜ, ಧಾರವಾಡದ ಶಿವಾನಂದ ಆರ್.ಮೇಲಿನಮನಿ ಮತ್ತು ತಂಡದಿಂದ ಜಗ್ಗಲಿಗೆ ಮೇಳ, ಮಂಡ್ಯದ ಲೋಕೇಶ ಮತ್ತು ತಂಡದಿಂದ ಪೂಜಾ ಕುಣಿತ ಒಳಗೊಂಡ ಜಾನಪದ ತಂಡಗಳು ಜಾನಪದ ಕಲಾ ವಾಹಿನಿಗೆ ಮೆರಗು ತುಂಬಲಿವೆ.

ಫೆ.೦೨ ರಂದು ಮುಖ್ಯಮಂತ್ರಿಗಳಿಂದ ಕನಕಗಿರಿ ಉತ್ಸವ ಉದ್ಘಾಟನೆ


ಕೊಪ್ಪಳ ಜ. : ಜಿಲ್ಲಾಡಳಿತ, ಜಿ.ಪಂ. ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಫೆ.೦೨ ರಂದು ಸಂಜೆ ೬.೦೦ ಗಂಟೆಗೆ ಕನಕಗಿರಿಯ ಕನಕರಾಯ ವೇದಿಕೆಯಲ್ಲಿ ಜರುಗಲಿದೆ. ಉತ್ಸವದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಕನಕಗಿರಿ ಶಾಸಕ ಶಿವರಾಜ ಎಸ್. ತಂಗಡಗಿ ಅವರು ವಹಿಸುವರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕನಕಗಿರಿ ಸಂಸ್ಥಾನ ಮಠದ ಶ್ರೀ ಚನ್ನಮಲ್ಲ ಮಹಾಸ್ವಾಮಿಜಿ ಸ್ವರ್ಣಗಿರಿ, ಸುಳೆಕಲ್ಲ ಬೃಹನ್ಮಠದ ಶ್ರೀ ಭುವನೇಶ್ವರ ತಾತನವರು, ಅರಳಿಹಳ್ಳಿಯ ಬೃಹನ್ಮಠದ ಶ್ರೀ ಗವಿಸಿದ್ದೇಶ್ವರ ತಾತನವರು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ, ರಾಜ್ಯ ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಬಾಲಚಂದ್ರ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸಣ್ಣ ಕೈಗಾರಿಕೆ ಸಚಿವ ನರಸಿಂಹ ನಾಯಕ್ (ರಾಜೂಗೌಡ) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಶಿವರಾಮಗೌಡ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಮುನವಳ್ಳಿ, ಸಂಗಣ್ಣ ಕರಡಿ, ಈಶಣ್ಣ ಗುಳಗಣ್ಣವರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಮಹಾಂತಗೌಡ ಪಾಟೀಲ್, ಕಾಡಾ ಅಧ್ಯಕ್ಷ ಹೆಚ್. ಗಿರೇಗೌಡ, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಗಂಗಾವತಿ ತಾ.ಪಂ. ಅಧ್ಯಕ್ಷ ಕೆ. ಬಸವರಾಜ ಹುಲಿಯಪ್ಪ, ಜಿ.ಪಂ. ಸದಸ್ಯ ಗಂಗಣ್ಣ ಎಂ.ಸಮಗಂಡಿ, ತಾ.ಪಂ.ಸದಸ್ಯರಾದ ಹೊನ್ನೂರಸಾಬ ಮೇಸ್ತ್ರಿ, ಸರ್ವಮಂಗಳ ಎಮ್.ಭೂಸನೂರಮಠ, ಕನಕಗಿರಿ ಗ್ರಾ.ಪಂ. ಅಧ್ಯಕ್ಷೆ ರಂಗಮ್ಮ ಆಂಜನೇಯ, ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹೆಚ್.ಎಮ್. ತಿಪ್ಪೇರುದ್ರಸ್ವಾಮಿ ಸೇರಿದಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಸೇರಿದಂತೆ ಜಿ.ಪಂ., ತಾ.ಪಂ., ಗ್ರಾ.ಪಂ. ಸರ್ವ ಸದಸ್ಯರು ಭಾಗವಹಿಸುವರು. ಫೆ. ೦೩ ರಂದು ಸಮಾರೋಪ : ಕನಕಗಿರಿ ಉತ್ಸವದ ಸಮಾರೋಪ ಸಮಾರಂಭ ಫೆ. ೦೩ ರಂದು ರಾತ್ರಿ ೯.೩೦ ಗಂಟೆಗೆ ಕನಕಗಿರಿಯ ಕನಕರಾಯ ವೇದಿಕೆಯಲ್ಲಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ಅವರು ಸಮಾರೋಪ ಭಾಷಣ ಮಾಡುವರು. ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಶಿವರಾಜ ಎಸ್.ತಂಗಡಗಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ರಂಗಮ್ಮ ಆಂಜನೇಯ, ಜಿ.ಪಂ.ಸದಸ್ಯ ಗಂಗಣ್ಣ ಎಮ್.ಸಮಗಂಡಿ, ತಾ.ಪಂ.ಸದಸ್ಯರಾದ ಹೊನ್ನೂರಸಾಬ ಮೇಸ್ತ್ರಿ, ಸರ್ವಮಂಗಳ ಎಮ್.ಭೂಸನೂರಮಠ ಸೇರಿದಂತೆ ಗ್ರಾ.ಪಂ.ಸರ್ವ ಸದಸ್ಯರು ಭಾಗವಹಿಸುವರು.

ಬುಧವಾರ, ಜನವರಿ 30, 2013

ಕಣ್ಣಿದ್ದವರಿಗೆ ಕನಕಗಿರಿ ಗತ ವೈಭವ ಮರುಕಳಿಸಲಿದೆ ಕನಕಗಿರಿ ಉತ್ಸವ


ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಗ್ರಾಮ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನುಡಿ. ಕನಕಗಿರಿಯ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ್ಪನ ಬಾವಿ, ಈ ಎಲ್ಲ ದೇವಾಲಯಗಳಲ್ಲಿನ ಶಿಲ್ಪಕಲೆ, ಚಿತ್ರಕಲೆಯನ್ನು ಆಧರಿಸಿಯೇ ಈ ನಾಣ್ನುಡಿ ಜನಪದರಲ್ಲಿ ಹರಿದು ಬಂದಿರುವುದಾಗಿ ಹೇಳಬಹುದಾಗಿದೆ. ಕನಕಮುನಿ ಎಂಬ ಮಹಾ ತಪಸ್ವಿಯ ಪ್ರಭಾವದಿಂದ ಸುವರ್ಣದ (ಬಂಗಾರ/ಕನಕ) ಮಳೆ ಸುರಿಯಿತೆಂದೂ, ಇದಕ್ಕಾಗಿಯೇ, ಈ ಭಾಗಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ. ಕ್ರಿ.ಶ. ೧೪೩೬ ರಿಂದ ೧೯೪೮ ರವರೆಗೂ ಕನಕಗಿರಿ ಸಂಸ್ಥಾನದ ಸುಮಾರು ಹನ್ನೆರಡು ದೊರೆಗಳು ಆಳ್ವಿಕೆ ನಡೆಸಿದ್ದು, ಈ ಪೈಕಿ ಮೊದಲ ಒಂಭತ್ತು ದೊರೆಗಳು ಕನಕಗಿರಿಯನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು, ಉಳಿದ ಮೂವರು ದೊರೆಗಳು ಹುಲಿಹೈದರ್ ನಿಂದ ಆಳ್ವಿಕೆ ನಡೆಸಿದ್ದಾರೆ. ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬಣ್ಣಿಸಲ್ಪಿಟ್ಟಿರುವ ವಿಜಯನಗರ ಸಾಮ್ರಾಜ್ಯಕ್ಕೂ ಕನಕಗಿರಿಗೂ ಅವಿನಾಭಾವ ಸಂಬಂಧವಿದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳಲ್ಲೊಬ್ಬರಾದ ಪ್ರೌಢದೇವರಾಯನ ಕಾಲದಲ್ಲಿ, ಕನಕಗಿರಿ ನಾಯಕರಿಗೆ ಉತ್ತಮ ಪ್ರಾತಿನಿಧ್ಯವಿತ್ತು. ತನ್ನ ಬಲಭಾಗದಲ್ಲಿ ಕನಕಗಿರಿ ನಾಯಕರು ಆಸೀನರಾಗಲು ಅವಕಾಶ ಕೊಟ್ಟಿದ್ದರೆಂದರೆ, ಕನಕಗಿರಿ ನಾಯಕರ ಪ್ರಭಾವವನ್ನು ಇಲ್ಲಿ ಊಹಿಸಿಕೊಳ್ಳಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಪರವಾಗಿ ಬೇಹುಗಾರಿಕೆ ದಳದ ಮುಖ್ಯಸ್ಥರಾಗಿಯೂ ಕನಕಗಿರಿ ನಾಯಕರು ಕಾರ್ಯ ನಿರ್ವಹಿಸಿದ್ದರೆಂಬುದಾಗಿ ಇತಿಹಾಸ ತಿಳಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳು ಕನಕಗಿರಿಯ ಶ್ರೀ ಕನಕಾಚಲಪತಿಯ ಪರಮ ಭಕ್ತರಾಗಿದ್ದು, ಖುದ್ದು ಶ್ರೀಕೃಷ್ಣದೇವರಾಯನೇ ಸ್ವರಚಿತ 'ಅಮುಕ್ತಾಮೌಲ್ಯ' ಗ್ರಂಥದಲ್ಲಿ ಕನಕಾಚಲಪತಿ ದೇವರ ಮಹಿಮೆಯನ್ನು ಬಣ್ಣಿಸಿದ್ದಾನೆ. ಕನಕಗಿರಿಯ ದೊರೆಗಳಲ್ಲಿ ನವಾಬ ಇಮ್ಮಡಿ ಉಡುಚಪ್ಪ ನಾಯಕ ಅತ್ಯಂತ ಪ್ರಭಾವಿ ಹಾಗೂ ಶಕ್ತಿಶಾಲಿ ಯೋಧನಾಗಿದ್ದನು. ಈತನ ಕಾಲದಲ್ಲಿ ಬಿಜಾಪುರದ ಆದಿಲ್‌ಶಾಹಿ ದಂಡನಾಯಕ ಅಫ್ಜಲ್‌ಖಾನ್ ನನ್ನು ಕ್ರಿ.ಶ. ೧೬೫೩ ರಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ್ದನು. ಈತನ ಇಬ್ಬರು ರಾಣಿಯರಾದ ಚಿನ್ನಮ್ಮ ಹಾಗೂ ಕನಕಮ್ಮ ಅವರು ಜನಾನುರಾಗಿಯಾಗಿದ್ದರು. ನವಾಬ ಉಡುಚಪ್ಪ ನಾಯಕನೊಬ್ಬನೇ ಕನಕಗಿರಿ ಭಾಗ ಒಂದರಲ್ಲಿಯೇ ೩೫೦ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದಿದ್ದು ಎಂಬುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ರೈತರೊಂದಿಗಿನ ಇವರ ಸೌಜನ್ಯಯುತ ಬಾಂಧವ್ಯದಿಂದಾಗಿ ಕನಕಗಿರಿ ನಾಯಕರಿಗೆ ವಿಜಯನಗರ ಸಾಮ್ರಾಟರ ಬಲಪಾರ್ಶ್ವದಲ್ಲಿ ಕುಳಿತುಕೊಳ್ಳುವ ವಿಶೇಷ ಮನ್ನಣೆ ದೊರೆತಿತ್ತು. ಪ್ರಸಿದ್ಧ ಕನಕಾಚಲನಪತಿ ದೇವಾಲಯ : ಕನಕಗಿರಿಯ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಕನಕಾಚಲಪತಿ ದೇವಾಲಯ. ಕನಕಾಚಲಪತಿ ದೇವಾಲಯದ ಗರ್ಭಗುಡಿಯನ್ನು ಸಂಸ್ಥಾನದ ಮೂಲಪುರುಷ ಪರಸಪ್ಪ ಉಡುಚನಾಯಕ ನಿರ್ಮಿಸಿದ್ದು, ನವಾಬ ಉಡುಚನಾಯಕರು ಈ ದೇವಾಲಯದ ಮಧ್ಯರಂಗಮಂಟಪ ಕಟ್ಟಿಸಿದರೆ, ಕೆಲವಡಿ ಉಡುಚನಾಯಕ ದೇವಾಲಯದ ಗಾರೆ ಶಿಲ್ಪ ಸೇರಿದಂತೆ ಪ್ರಮುಖ ಮೂರು ಬೃಹತ್ ಮುಖ್ಯ ಗೋಪುರ ಹಾಗೂ ಪ್ರಾಂಗಣ ನಿರ್ಮಾಣ ಮಾಡಿದನು. ಕನಕಾಚಲಪತಿ ದೇವಾಲಯದಲ್ಲಿ ಸುಮಾರು ಒಂದೂಕಾಲು ಅಡಿ ಎತ್ತರದ ಶ್ರೀ ಲಕ್ಷ್ಮೀನರಸಿಂಹ ದೇವರು ಉದ್ಭವಿಸಿದ್ದು, ಸಾಲಿಗ್ರಾಮ ರೂಪದ ದೇವರಿಗೆ ಲೋಹದ ಕಿರೀಟವಿದೆ. ಸನಿಹದಲ್ಲಿಯೇ ಸಂಜೀವಮೂರ್ತಿಯ (ಆಂಜನೇಯ) ಸುಂದರ ವಿಗ್ರಹವಿದೆ. ಕನಕಾಚಲಪತಿ ದೇವಾಲಯವು ದ್ವಾರಮಂಟಪ, ರಂಗಮಂಟಪ, ಸಭಾಮಂಟಪ, ಆಕರ್ಷಕ ಕಂಬಗಳು, ಗರ್ಭಗುಡಿ, ಪಂಚಶಿಖರ ಮತ್ತು ದೀಪಸ್ತಂಭಗಳನ್ನು ಒಳಗೊಂಡಿದೆ. ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ದೇವಾಲಯದ ಪ್ರಾಂಗಣ ಸುಮಾರು ೨೦೦ ಅಡಿ ಉದ್ದ ೧೦೦ ಅಡಿ ಅಗಲವಿದೆ. ದೇವಾಲಯದ ಪ್ರಾಕಾರದಲ್ಲಿ ಸರಸ್ವತಿ ಮತ್ತು ಲಕ್ಷ್ಮೀನಾರಾಯಣರ ಮಂಟಪ ಸೇರಿದಂತೆ ಕನಕಗಿರಿ ಸಂಸ್ಥಾನದ ಕೆಲವು ಪ್ರಮುಖ ನಾಯಕರ ಕಲ್ಲಿನ ಪ್ರತಿಮೆಗಳೂ ಇವೆ. ವೆಂಕಟಪ್ಪನ ಬಾವಿ : ಕನಕಗಿರಿ ಸಂಸ್ಥಾನದ ನಾಲ್ಕನೆ ದೊರೆ ಒಂದನೆಯ ಕನಕನಾಯಕನ ತಮ್ಮ ವೆಂಕಟಪ್ಪನಾಯಕ ಕನಕಗಿರಿಯ ಊರ ಹೊರಗೆ ಲಕ್ಷ ವರಹ ವೆಚ್ಚದಿಂದ ಬಾವಿ ತೋಡಿಸಿದ್ದು, ಇದು ವೆಂಕಟಪ್ಪನ ಬಾವಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಈ ಬಾವಿಗೆ ಮೂರು ಕಡೆಗಳಿಂದಲೂ ಪ್ರವೇಶಕ್ಕೆ ಮೆಟ್ಟಿಲುಗಳಿದ್ದು, ಮೆಟ್ಟಿಲುಗಳ ಗೋಡೆಗಳ ಮೇಲೆ ಶಿವ ಮತ್ತು ನಾಗರಾಜನ ಉಬ್ಬು ಶಿಲ್ಪ, ಗಜಸಂಹಾರಮೂರ್ತಿ ಇದೆ. ಬಾವಿಯ ಎರಡೂ ಮಗ್ಗಲುಗಳಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ನುವಿನ ಗೃಹಗಳಿದ್ದು, ಒಟ್ಟು ೬೩ ಕಂಬಗಳು, ೩೭ ಅರ್ಧಕಂಬಗಳು ಹಾಗೂ ೧೬ ಮೂಲೆ ಕಂಬಗಳನ್ನು ಒಳಗೊಂಡಿದೆ. ಸಿಂಹದ ಮೇಲೆ ಕುಳಿತ ಸವಾರ, ಕುದುರೆ ಸವಾರ, ಆಂಜನೇಯ ಮೊದಲಾದ ಉಬ್ಬು ಶಿಲ್ಪಗಳನ್ನು ಇಲ್ಲಿ ನೋಡಬಹುದಾಗಿದೆ. ಕೊಳದ ಮೇಲ್ಭಾಗದಲ್ಲಿ ಆಕರ್ಷಕ ಕಂಬಗಳು, ದೇವತಾ ಗೃಹಗಳು, ಅಲಂಕಾರಿಕ ಕೆತ್ತನೆಗಳಿಂದ ವೆಂಕಟಪ್ಪನಬಾವಿ ಇನ್ನಷ್ಟು ಆಕರ್ಷಣೆಯನ್ನು ಹೊಂದಿದೆ. ಕನಕಗಿರಿ ಎಂದರೆ ದೇವಾಲಯಗಳ ಊರು ಎಂದೇ ಪ್ರಸಿದ್ಧವಾಗಿದ್ದು, ರಾಮೇಶ್ವರ, ಜಕ್ಕಮ್ಮ, ರಂಗನಾಥ, ತೇರಿನ ಹನುಮಪ್ಪ, ದುರ್ಗಾದೇವಿ, ಕಾಳಿಕಾದೇವಿ, ಅಂಬಾ, ತೇರಿನ ಹನುಮಪ್ಪ, ವೀರಭದ್ರೇಶ್ವರ, ಹಿರೇಹಳ್ಳದ ಬಸವೇಶ್ವರ, ಈಶ್ವರ ವೀರಭದ್ರೇಶ್ವರ, ಲಕ್ಷ್ಮೀದೇವಾಲಯ, ಮಲ್ಲಿಕಾರ್ಜುನ, ನಗರೇಶ್ವರ ಸೇರಿದಂತೆ ಹಲವಾರು ದೇವಾಲಯಗಳು ಈ ಭಾಗದಲ್ಲಿವೆ. ಉತ್ಸವಕ್ಕೆ ಭರದ ಸಿದ್ಧತೆ : ಕನಕಗಿರಿ ಭವ್ಯ ಗತ ವೈಭವವನ್ನು ಮರುಕಳಿಸುವಂತೆ ಮಾಡುವ ಹಾಗೂ ಕನಕಗಿರಿಯ ಐತಿಹಾಸಿಕ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಕನಕಗಿರಿ ಉತ್ಸವವನ್ನು ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಕನಕಗಿರಿಯ ಶಾಸಕ ಶಿವರಾಜ ತಂಗಡಗಿ ಅವರು ಹೆಚ್ಚಿನ ಆಸಕ್ತಿ ವಹಿಸಿ, ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರಕ್ಕೆ ಸಕಲ ನೆರವು ನೀಡಲು ಮುಂದಾಗಿದ್ದಾರೆ. ೨೦೧೦ ರಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದ್ದ ಕನಕಗಿರಿ ಉತ್ಸವದ ಸಾಂಸ್ಕೃತಿಕ, ಕ್ರೀಡಾ ವೈವಿಧ್ಯಗಳು ಹೃನ್ಮನಗಳಿಗೆ ಉಣಬಡಿಸಿದ್ದ ರಸದೌತಣ ಇನ್ನೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದೆ. ಕನಕಗಿರಿ ಉತ್ಸವದ ಅಂಗವಾಗಿ ಈ ಬಾರಿಯೂ ಹಲವಾರು ಕ್ರೀಡೆಗಳು, ಜಾನಪದ ಸೊಗಡಿನ ಸ್ಪರ್ಧೆಗಳು, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ೨೦೧೧ ರಲ್ಲಿ ರಾಜ್ಯದಲ್ಲಿ ಉಂಟಾದ ಭೀಕರ ಬರ, ಕನಕಗಿರಿ ಉತ್ಸವ ಆಚರಣೆಗೆ ತಣ್ಣೀರೆರಚಿತು. ಆದರೆ ಇದೀಗ ಮತ್ತೊಮ್ಮೆ ಕನಕಗಿರಿ ಉತ್ಸವ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಕನಕಗಿರಿಯ ನಾಗರೀಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ಕನಕಗಿರಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಎಲ್ಲ ಅಧಿಕಾರಿಗಳು, ಉಪಸಮಿತಿಗಳ ಅಧ್ಯಕ್ಷರು, ಉತ್ಸವಕ್ಕೆ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಶ್ರಮಿಸುತ್ತಿದ್ದು, ಈ ಬಾರಿಯ ಕನಕಗಿರಿ ಉತ್ಸವದಲ್ಲಿ ಸಾಂಸ್ಕೃತಿಕ ರಸದೌತಣ ಸವಿಯಲು ಸಾರ್ವಜನಿಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. - ತುಕಾರಾಂರಾವ್ ಬಿ.ವಿ., ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ

ಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆ


ಇದೇ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಅದ್ಧೂರಿ ಕನಕಗಿರಿ ಉತ್ಸವ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲು ಅನುಕೂಲವಾಗುವಂತೆ ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದಿಂದ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕನಕಗಿರಿ ಉತ್ಸವಕ್ಕೆ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಕನಕಗಿರಿ, ತಾವರಗೇರಾ, ಕಾರಟಗಿ ಮತ್ತು ಕೊಪ್ಪಳದಿಂದ ಕನಕಗಿರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಜನದಟ್ಟಣೆಗೆ ಅನುಸಾರವಾಗಿ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಸೋಮವಾರ, ಜನವರಿ 28, 2013

ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನ


ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕನಕಗಿರಿ ಉತ್ಸವವನ್ನು ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕುಸ್ತಿ, ವಾಲಿಬಾಲ್, ಕಬಡ್ಡಿ, ಮಲ್ಲಕಂಬ, ರಂಗೋಲಿ ಸೇರಿದಂತೆ ಹಲವು ಮುಕ್ತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದ್ದು, ೫೨, ೫೭, ೬೨, ೬೮, ೭೪ ಕೆ.ಜಿ. ವಿಭಾಗ ಮತ್ತು ೭೫ ಕೆ.ಜಿ. ಮೇಲ್ಪಟ್ಟ ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನಗಳನ್ನು ನೀಡಲಾಗುವುದು. ೭೫ ಕೆ.ಜಿ. ಮೇಲ್ಪಟ್ಟಿ ವಿಭಾಗದಲ್ಲಿ ವಿಜೇತರಾದವರಿಗೆ ಬೆಳ್ಳಿಗಧೆ ಮತ್ತು ಕನಕಗಿರಿ ಕೇಸರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಪ್ರಥಮ ಸ್ಥಾನ ಪಡೆದವರಿಗೆ ೨೫೦೦೦ ರೂ., ದ್ವಿತೀಯ- ರೂ. ೨೦೦೦೦, ತೃತೀಯ- ರೂ. ೧೫೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ೧೨೦೦೦ ರೂ. ಬಹುಮಾನ ನೀಡಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆ ಇದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೫೦೦೦ ರೂ., ದ್ವಿತೀಯ- ರೂ. ೨೦೦೦೦, ತೃತೀಯ- ರೂ. ೧೫೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ೧೨೦೦೦ ರೂ. ಬಹುಮಾನ ವಿತರಿಸಲಾಗುವುದು. ಪುರುಷರು ಮತ್ತು ಮಹಿಳಯರಿಗೆ ಮಲ್ಲಕಂಭ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸುವ ಪ್ರತಿ ೧೦ ತಂಡಗಳಿಗೆ ತಲಾ ೫೦೦೦ ರೂ.ಗಳ ಬಹುಮಾನ ನೀಡಲಾಗುವುದು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ- ೪೦೦೦, ದ್ವಿತೀಯ- ೩೦೦೦, ತೃತೀಯ- ೨೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ರೂ. ೧೦೦೦ ಗಳ ಬಹುಮಾನ ನೀಡಲಾಗುವುದು. ಕ್ರೀಡಾಕೂಟಗಳು ಫೆ. ೨ ಮತ್ತು ೩ ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಅಲ್ಲದೆ ಸ್ಪರ್ಧಾಳುಗಳಿಗೆ ಊಟೋಪಹಾರದ ವ್ಯವಸ್ಥೆ ಇರುತ್ತದೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಫೆ. ೨ ರಂದು ಬೆಳಿಗ್ಗೆ ೭-೩೦ ಗಂಟೆಗೆ ಸರಿಯಾಗಿ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನ ಕ್ರೀಡಾ ಸಮಿತಿಯಲ್ಲಿ ವರದಿ ಮಾಡಿಕೊಳ್ಳಬೇಕು. ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಫೆ. ೨ ರಂದು ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯೊಳಗಾಗಿ ತಮ್ಮ ತೂಕವನ್ನು ನೋಂದಾಯಿಸಿಕೊಳ್ಳಬೇಕು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳು ಜ. ೩೧ ರ ಒಳಗಾಗಿ ತಮ್ಮ ತಂಡದ ಹೆಸರನ್ನು ಕನಕಗಿರಿ ಸರ್ಕಾರಿ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕ ಶಾಮೀದ ಪಾಷಾ, ಮೊಬೈಲ್- ೯೪೮೧೪೪೦೬೮೩ ಅಥವಾ ತಿಪ್ಪೇಸ್ವಾಮಿ- ೯೦೦೮೩೬೩೬೭೦ ಅಥವಾ ಕೊಪ್ಪಳ ಕಾರ್ಯಾಲಯ- ೦೮೫೩೯-೨೦೧೪೦೦ ಇವರಲ್ಲಿ ನೋಂದಾಯಿಸಕೊಳ್ಳಬಹುದಾಗಿದೆ ಎಂದು ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರೂ ಆಗಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ್ ಘಾಡಿ ತಿಳಿಸಿದ್ದಾರೆ.

ಸೋಮವಾರ, ಜನವರಿ 21, 2013

ಕನಕಗಿರಿ ಉತ್ಸವ ಯಶಸ್ವಿ ಆಚರಣೆಗೆ ವಿವಿಧ ಸಮಿತಿಗಳ ರಚನೆ


ಕೊಪ್ಪಳ ಜ.೧೮ ಕನಕಗಿರಿ ಉತ್ಸವವನ್ನು ಬರುವ ಫೆ.೦೨ ಮತ್ತು ೦೩ ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಉತ್ಸವದ ಯಶಸ್ವಿ ನಿರ್ವಹಣೆಗೆ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಒಟ್ಟು ೧೭ ಸಮಿತಿಗಳನ್ನು ರಚಿಸಿ, ಉತ್ಸವ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ. ವಿಶೇಷವೆಂದರೆ, ಉಪಸಮಿತಿಗಳಲ್ಲಿ ವಿವಿಧ ಸಂಘಟನೆಗಳನ್ನೂ ಸಹ ತೊಡಗಿಸಿಕೊಳ್ಳಲಾಗಿದೆ. ಕನಕಗಿರಿ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ಹಲವು ಉಪಸಮಿತಿಗಳನ್ನು ರಚಿಸಿದ್ದು ಸಮಿತಿಯ ಅಧ್ಯಕ್ಷರು, ಸದಸ್ಯರುಗಳ ವಿವರ ಇಂತಿದೆ. ಸ್ವಾಗತ ಸಮಿತಿ : ಅಧ್ಯಕ್ಷರು- ಸಹಾಯಕ ಆಯುಕ್ತರು, ಸದಸ್ಯರು- ಜಿ.ಪಂ. ಮುಖ್ಯ ಯೋಜನಾಧಿಕಾರಿಗಳು, ಭೂಮಾಪನಾ ಇಲಾಖೆ ಉಪನಿರ್ದೇಶಕರು, ಕೊಪ್ಪಳ ತಹಶೀಲ್ದಾರರು, ಮಾತೃಭೂಮಿ ಯುವಕ ಸಂಘ ಕನಕಗಿರಿ, ರಾಜೀವ್‌ಗಾಂಧಿ ಯುವಕ ಸಂಘ ಕನಕಗಿರಿ. ಸದಸ್ಯ ಕಾರ್ಯದರ್ಶಿ- ಗಂಗಾವತಿ ತಹಶೀಲ್ದಾರ್. ಗೌರವ ಸದಸ್ಯರು- ಕನಕಗಿರಿ ಗ್ರಾ.ಪಂ. ಅಧ್ಯಕ್ಷರು, ಕನಕಗಿರಿ ಕ್ಷೇತ್ರದ ಜಿ.ಪಂ. ಸದಸ್ಯರು, ಕನಕಗಿರಿ ತಾ.ಪಂ. ಸದಸ್ಯರು. ಸಾಂಸ್ಕೃತಿಕ ಸಮಿತಿ : ಅಧ್ಯಕ್ಷರು- ಜಿ.ಪಂ. ಉಪಕಾರ್ಯದರ್ಶಿಗಳು, ಸದಸ್ಯರು- ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು, ಆರಕ್ಷಕ ಉಪ ಅಧೀಕ್ಷಕರು ಗಂಗಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಖಜಾನಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು. ವೇದಿಕೆ ಸಮಿತಿ : ಅಧ್ಯಕ್ಷರು- ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೊಪ್ಪಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಡಿ.ಯು.ಡಿ.ಸಿ., ಕೊಪ್ಪಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂ.ರಾ.ಇಂ. ಗಂಗಾವತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಗಂಗಾವತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಂಪಾವನ, ಮುನಿರಾಬಾದ್, ಪೌರಾಯುಕ್ತರು, ನಗರಸಭೆ, ಗಂಗಾವತಿ, ಕೇಂದ್ರಸ್ಥಾನಿಕ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಕೊಪ್ಪಳ, ಕರ್ನಾಟಕ ರಕ್ಷಣಾ ವೇದಿಕೆ ಕನಕಗಿರಿ, ತಿರುಳ್ಗನ್ನಡ ಕ್ರಿಯಾ ಸಮಿತಿ ಕನಕಗಿರಿ. ಸದಸ್ಯ ಕಾರ್ಯದರ್ಶಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೊಪ್ಪಳ, ಗೌರವ ಸದಸ್ಯರು- ಉಪಾಧ್ಯಕ್ಷರು, ಗ್ರಾ.ಪಂ. ಕನಕಗಿರಿ. ಆಹಾರ ಸಮಿತಿ : ಅಧ್ಯಕ್ಷರು- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು, ಸದಸ್ಯರು- ತೋಟಗಾರಿಕೆ ಉಪನಿರ್ದೇಶಕರು, ಕೊಪ್ಪಳ, ಉಪನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಕೊಪ್ಪಳ, ಪೌರಾಯುಕ್ತರು, ನಗರಸಭೆ, ಗಂಗಾವತಿ, ಅಬಕಾರಿ ನಿರೀಕ್ಷಕರು, ಗಂಗಾವತಿ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕೊಪ್ಪಳ, ಕನ್ನಡ ಸೇನೆ ಕನಕಗಿರಿ, ಮಾದಿಗ ದಂಡೋರ ಕನಕಗಿರಿ. ಕ್ರೀಡಾ ಸಮಿತಿ : ಅಧ್ಯಕ್ಷರು- ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ಸದಸ್ಯರು- ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕನಕಗಿರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ವೈ.ಸುದರ್ಶನರಾವ್ ದೈಹಿಕ, ಅಗ್ರಿ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷರು, ಗಂಗಾವತಿ., ಟೈಗರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು, ಗಂಗಾವತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕನಕಗಿರಿ, ಪಟ್ಟಣ ಸಹಕಾರ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ-ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳು, ಗಂಗಾವತಿ, ಗೌರವ ಸದಸ್ಯರು- ಜಿಲ್ಲಾ ಪಂಚಾಯತ್ ಸದಸ್ಯರು, ಕನಕಗಿರಿ ಕ್ಷೇತ್ರ. ವಸತಿ ಸಮಿತಿ : ಅಧ್ಯಕ್ಷರು- ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು. ಸದಸ್ಯರು- ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ. ಜಿ.ಪಂ., ಕೊಪ್ಪಳ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಕೊಪ್ಪಳ, ತಹಸಿಲ್ದಾರ್, ಕೊಪ್ಪಳ, ಪೌರಾಯುಕ್ತರು, ನಗರಸಭೆ ಕೊಪ್ಪಳ ಮತ್ತು ಗಂಗಾವತಿ. ತಹಸಿಲ್ದಾರರು, ಗಂಗಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ, ಜೈ ಕರ್ನಾಟಕ ಕನಕಗಿರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕನಕಗಿರಿ. ಸಾರಿಗೆ ಸಮಿತಿ : ಅಧ್ಯಕ್ಷರು- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಸದಸ್ಯರು-ವಿಭಾಗೀಯ ನಿಯಂತ್ರಣಾಧಿಕಾರಿಗಳು, ಈ.ಕ.ರ.ಸಾರಿಗೆ ಸಂಸ್ಥೆ, ಕೊಪ್ಪಳ, ತಹಸಿಲ್ದಾರ್, ಕೊಪ್ಪಳ, ಪೌರಾಯುಕ್ತರು, ನಗರಸಭೆ ಕೊಪ್ಪಳ ಮತ್ತು ಗಂಗಾವತಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಡಿ.ಯು.ಡಿ.ಸಿ., ಕೊಪ್ಪಳ, ಟ್ರ್ಯಾಕ್ಟರ್ ಡ್ರೈವರ್ ಸಂಘ ಕನಕಗಿರಿ, ಹಮಾಲರ ಸಂಘ (ಗಂಜ) ಕನಕಗಿರಿ. ಮೆರವಣಿಗೆ ಸಮಿತಿ : ಅಧ್ಯಕ್ಷರು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಉಪಾಧ್ಯಕ್ಷರು- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಸದಸ್ಯರು- ಆರಕ್ಷಕ ವೃತ್ತ ನಿರೀಕ್ಷಕರು, ಗಂಗಾವತಿ ಗ್ರಾಮೀಣ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗಂಗಾವತಿ. ಹಮಾಲರ ಸಂಘ(ಬಜಾರ) ಕನಕಗಿರಿ, ಮೇಶನರ್ ಸಂಘ ಕನಕಗಿರಿ. ಗೌರವ ಸದಸ್ಯರು- ಕನಕಗಿರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾ.ಪಂ.ಸದಸ್ಯರುಗಳು, ತಾ.ಪಂ. ಸದಸ್ಯರು, , ಸದಸ್ಯ ಕಾರ್ಯದರ್ಶಿ- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ. ಆರೋಗ್ಯ ನೈರ್ಮಲ್ಯ ಸಮಿತಿ : ಅಧ್ಯಕ್ಷರು- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸದಸ್ಯರು- ವೈದ್ಯಾಧಿಕಾರಿಗಳು, ಪ್ರಾ.ಆ.ಕೇಂದ್ರ, ಕನಕಗಿರಿ, ಗಂಗಾವತಿ, ಆಟೋ ಚಾಲಕರ ಸಂಘ ಕನಕಗಿರಿ, ವಾಲ್ಮೀಕಿ ಯುವಕ ಸಂಘ ಕನಕಗಿರಿ.ಸದಸ್ಯ ಕಾರ್ಯದರ್ಶಿ- ತಾಲೂಕು ವೈದ್ಯಾಧಿಕಾರಿಗಳು. ಭದ್ರತಾ ಸಮಿತಿ : ಅಧ್ಯಕ್ಷರು- ಜಿಲ್ಲಾ ಆರಕ್ಷಕ ಅಧೀಕ್ಷಕರು, ಕೊಪ್ಪಳ, ಸದಸ್ಯರು- ಆರಕ್ಷಕ ಉಪ ಅಧೀಕ್ಷಕರು, ಕೊಪ್ಪಳ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಕೊಪ್ಪಳ, ಕಮಾಂಡೆಂಟ್, ಗೃಹರಕ್ಷಕ ದಳ, ಕೊಪ್ಪಳ, ಶ್ರೀ ಕನಕಾಚಲಪತಿ ರೈತ ಕ್ಷೇಮಾಭಿವೃದ್ದಿ ಸಂಘ ಕನಕಗಿರಿ, ದಲಾಲಿ ವ್ಯಾಪಾರಿಗಳ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ- ಆರಕ್ಷಕ ಉಪ ಅಧೀಕ್ಷಕರು, ಗಂಗಾವತಿ. ಮಾಧ್ಯಮ ಸಮಿತಿ : ಅಧ್ಯಕ್ಷರು- ಜಿಲ್ಲಾ ವಾರ್ತಾಧಿಕಾರಿಗಳು, ಸದಸ್ಯರು- ಡಿ.ಐ.ಒ.ಎನ್.ಐ.ಸಿ. ಅಧಿಕಾರಿಗಳು ಕೊಪ್ಪಳ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು,ಕೊಪ್ಪಳ, ಜಂಟಿಕೃಷಿ ನಿರ್ದೇಶಕರ ತಾಂತ್ರಿಕ ಸಹಾಯಕರು, ಪ್ರೋಗ್ರಾಮ್ ಮ್ಯಾನೇಜರ್, ಡಿ.ಹೆಚ್.ಓ., ಕಚೇರಿ, ಕೊಪ್ಪಳ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಸಾಕ್ಷರತಾ ಸಮಿತಿ ಕೊಪ್ಪಳ, ಸುದ್ದಿ ಮಾಧ್ಯಮ ಸಂಘ ಕನಕಗಿರಿ, ಕಿರಾಣಿ ವರ್ತಕರ ಸಂಘ ಕನಕಗಿರಿ, ಹಿಟ್ಟಿನ ಗಿರಣಿ ಮಾಲೀಕರ ಸಂಘ ಕನಕಗಿರಿ. ಮೂಲಭೂತ ಸೌಕರ್ಯಗಳ ಸಮಿತಿ : ಅಧ್ಯಕ್ಷರು- ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾ.ಇಂ., ವಿಭಾಗ, ಕೊಪ್ಪಳ, ಪೌರಾಯುಕ್ತರು, ನಗರಸಭೆ, ಗಂಗಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ, ಉಪನಿರ್ದೇಶಕರು, ಕರ್ನಾಟಕ ಭೂಸೇನಾ ನಿಗಮ, ಕೊಪ್ಪಳ, ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೊಪ್ಪಳ, ಶ್ರೀ ಕನಕಾಚಲಪತಿ ಭಜನಾ ಮಂಡಳಿ ಕನಕಗಿರಿ, ಸದಸ್ಯ ಕಾರ್ಯದರ್ಶಿ-ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂ.ರಾ.ಇಂ. ಉಪವಿಭಾಗ, ಗಂಗಾವತಿ. ವಸ್ತು ಪ್ರದರ್ಶನ ಸಮಿತಿ : ಅಧ್ಯಕ್ಷರು- ಅರಣ್ಯ ಸಂರಕ್ಷಣಾಧಿಕಾರಿಗಳು, ಸದಸ್ಯರು- ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಕೊಪ್ಪಳ, ಸಹಾಯಕ ನಿರ್ದೇಶಕರು, ಜವಳಿ ಮತ್ತು ಕೈಮಗ್ಗ ಇಲಾಖೆ, ಕೊಪ್ಪಳ, ಸಹಾಯಕ ನಿರ್ದೇಶಕರು, ನಗರ ಯೋಜನಾ ಇಲಾಖೆ, ಕೊಪ್ಪಳ, ಜಿಲ್ಲಾ ಗ್ರಂಥಪಾಲಕರು, ಜಿಲ್ಲಾ ಗ್ರಂಥಾಲಯ, ಕೊಪ್ಪಳ, ಹೆಚ್ಚುವರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಕೊಪ್ಪಳ, ಖಾದಿ ಮತ್ತು ಗ್ರಾಮೋದ್ಯೋಗ ಉಪನಿರ್ದೇಶಕರು, ಕೊಪ್ಪಳ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಂಪಾವನ, ಮುನಿರಾಬಾದ್. ಸಂಘಟನಾ ಸಮಿತಿ (ಒಟ್ಟಾರೆ ಉಸ್ತುವಾರಿಗಳು) : ಅಧ್ಯಕ್ಷರು- ಜಿಲ್ಲಾಧಿಕಾರಿಗಳು, ಸಹ ಅಧ್ಯಕ್ಷರು- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸದಸ್ಯರು- ಎಲ್ಲ ಸಮಿತಿಗಳ ಅಧ್ಯಕ್ಷರುಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಸದಸ್ಯ ಕಾರ್ಯದರ್ಶಿ- ಅಪರ ಜಿಲ್ಲಾಧಿಕಾರಿಗಳು. ಪ್ರವಾಸೋದ್ಯಮ ಸಮಿತಿ : ಅಧ್ಯಕ್ಷರು- ಪ್ರವಾಸೋದ್ಯಮ ಇಲಾಖೆ, ಹೊಸಪೇಟೆ, ಸಹಾಯಕ ನಿರ್ದೇಶಕರು. ವಿದ್ಯುತ್ ಸರಬರಾಜು ಸಮಿತಿ : ಅಧ್ಯಕ್ಷರು- ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜೆಸ್ಕಾಂ ಉಪವಿಭಾಗ, ಗಂಗಾವತಿ., ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ನಗರಸಭೆ, ಗಂಗಾವತಿ., ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ. ಕನಕಗಿರಿ. ಆಮಂತ್ರಣ ಪತ್ರಿಕೆ ಸಮಿತಿ : ಅಧ್ಯಕ್ಷರು- ಸಹಾಯಕ ಆಯುಕ್ತರು, ಕೊಪ್ಪಳ, ಸದಸ್ಯರು- ತಹಸಿಲ್ದಾರರು, ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ. ಕನಕಗಿರಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಸಂಬಂಧಪಟ್ಟ ಎಲ್ಲ ಉಪಸಮಿತಿಗಳ ಅಧ್ಯಕ್ಷರು, ಸದಸ್ಯರು, ಗೌರವ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಅಧಿಕಾರಿಗಳು ತಮಗೆ ವಹಿಸಿರುವಂತಹ ಕಾರ್ಯಗಳನ್ನು ಚಾಚೂ ತಪ್ಪದೆ, ಸಮರ್ಪಕವಾಗಿ ನಿರ್ವಹಿಸಿ, ಉತ್ಸವದ ಯಶಸ್ವಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕೋರಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ಕನಕಗಿರಿ ಉತ್ಸವ-ತುಳಸಿ ಮದ್ದಿನೇನಿ

ಕೊಪ್ಪಳ ಜ : ಬರುವ ಫೆಬ್ರವರಿ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಿಂದ ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು. ಕನಕಗಿರಿ ಉತ್ಸವ ಆಚರಣೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಕಗಿರಿ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಉತ್ಸವಕ್ಕಾಗಿ ಸರ್ಕಾರ ಸದ್ಯ ೩೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಫೆಬ್ರವರಿ ಮೊದಲ ವಾರ ಅಂದರೆ ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದ್ದು, ಉತ್ಸವದ ಅಂಗವಾಗಿ ಪ್ರಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ಹಂಸಲೇಖ, ಗುರುಕಿರಣ್, ರಾಜೇಶ್ ಕೃಷ್ಣನ್, ಪ್ರಭಾತ್ ಕಲಾ ತಂಡ ಮುಂತಾದ ಕಲಾವಿದರ ಆಯ್ಕೆ ಬಗ್ಗೆ ಚರ್ಚಿಸಿ ನಂತರ ನಿರ್ಧರಿಸಲಾಗುವುದು. ರಾಷ್ಟ್ರ, ರಾಜ್ಯ ಮಟ್ಟದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಲೆ ಅನಾವರಣಕ್ಕೆ ನಿರ್ಧರಿಸಲಾಗಿದ್ದು, ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ಬಾರಿ ಉತ್ಸವವನ್ನು ಯಶಸ್ವಿಯನ್ನಾಗಿಸಲು ಜಿಲ್ಲಾ ಆಡಳಿತದೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳನ್ನೂ ಸಹ ವಿವಿಧ ಉಪ ಸಮಿತಿಗಳಲ್ಲಿ ಸೇರಿಸಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಉತ್ಸವದ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ, ಪುರುಷರಿಗೆ ಕುಸ್ತಿ ಪಂದ್ಯಾಟಗಳನ್ನು ನಡೆಸಲಾಗುವುದು. ಇವಲ್ಲದೆ, ಗ್ರಾಮೀಣ ಸೊಗಡಿನ ಕ್ರೀಡಾ ಸ್ಪರ್ಧೆಗಳು, ಕವಿಗೋಷ್ಠಿ, ವಿಚಾರಗೋಷ್ಠಿಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ. ಉತ್ಸವದ ಅಂಗವಾಗಿ ಪುಸ್ತಕ ಪ್ರದರ್ಶನ ಮೇಳ, ಪ್ರಶಸ್ತಿ ವಿಜೇತ ಮಕ್ಕಳು ರೂಪಿಸಿದ ವಿಜ್ಞಾನ ವಸ್ತುಪ್ರದರ್ಶನ, ರೈತರಿಗೆ ಅನುಕೂಲವಾಗುವಂತೆ ವಿವಿಧ ರಾಸುಗಳ ತಳಿ ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದ್ದು, ವಿವಿಧ ಜಿಲ್ಲೆಗಳ ಪ್ರಮುಖ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು. ಪುಸ್ತಕ ಪ್ರದರ್ಶನಕ್ಕೆ ಮುಂದಾಗುವ ಪ್ರಮುಖ ಪ್ರಕಾಶಕರಿಗೆ ಮಳಿಗೆ ಒದಗಿಸಲಾಗುವುದು. ಉತ್ಸವದ ವ್ಯಾಪಕ ಪ್ರಚಾರಕ್ಕಾಗಿ ಮಾಧ್ಯಮದವರಿಗಾಗಿ ಕನಕಗಿರಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು. ಕನಕಗಿರಿ ಉತ್ಸವಕ್ಕೆ ಆಗಮಿಸುವ ಅತಿಥಿ ಗಣ್ಯರು, ಕಲಾವಿದರ ವಾಸ್ತವ್ಯಕ್ಕಾಗಿ ಗಂಗಾವತಿ ನಗರದ ಪ್ರಮುಖ ವಸತಿಗೃಹಗಳನ್ನು ಕಾಯ್ದಿರಿಸಲು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ಮಾತನಾಡಿ, ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಸಹಕಾರ ನೀಡಲಾಗುವುದು. ಉತ್ಸವದ ಅಂಗವಾಗಿ ಕನಕಗಿರಿಯ ಪ್ರಮುಖ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು. ಉತ್ಸವದ ಸಂದರ್ಭದಲ್ಲಿ ಕನಕಗಿರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಕನಕಗಿರಿಯ ಪ್ರಮುಖ ರಸ್ತೆಗಳು, ಬೀದಿ ದೀಪಗಳನ್ನು ಸಮರ್ಪಕಗೊಳಿಸುವ ಮೂಲಕ ಸಜ್ಜುಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಕನಕಗಿರಿ ಉತ್ಸವ ಸಂದರ್ಭದಲ್ಲಿ ಎರಡು ದಿನಗಳ ಊಟದ ವ್ಯವಸ್ಥೆ ಹಾಗೂ ಖರ್ಚು ವೆಚ್ಚವನ್ನು ತಾವೇ ವಹಿಸಿಕೊಳ್ಳುವುದಾಗಿ ಶಾಸಕ ಶಿವರಾಜ ತಂಗಡಗಿ ಅವರು ಭರವಸೆ ನೀಡಿದರು. ಕನಕಗಿರಿ ಉತ್ಸವವನ್ನು ಯಶಸ್ವಿಯನ್ನಾಗಿಸಲು ವೇದಿಕೆ, ಸಾಂಸ್ಕೃತಿಕ, ಆಹಾರ, ವಸತಿ, ಕ್ರೀಡೆ, ಮೆರವಣಿಗೆ, ಮಾಧ್ಯಮ, ಭದ್ರತೆ, ಆರೋಗ್ಯ ಮುಂತಾದ ಉಪಸಮಿತಿಗಳನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಜ. ೧೫ ರಂದು ಮಧ್ಯಾಹ್ನ ೨ ಗಂಟೆಗೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ್, ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಕಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನಕಗಿರಿ ಭಾಗದ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.