WEL COME TO KANAKAGIRI UTSAV 2013

ಸೋಮವಾರ, ಫೆಬ್ರವರಿ 4, 2013

ವೈಭವದ ಕನಕಗಿರಿ ಉತ್ಸವಕ್ಕೆ ವರ್ಣರಂಜಿತ ತೆರೆ


ಕೊಪ್ಪಳ (ಕನಕಗಿರಿ ಕನಕರಾಯ ವೇದಿಕೆ) ಫೆ. ೦೩: ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಫೆಬ್ರವರಿ ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಜರುಗಿದ 'ಕನಕಗಿರಿ ಉತ್ಸವ' ಭಾನುವಾರ ವರ್ಣರಂಜಿತ ತೆರೆ ಕಂಡಿತು. ಕನಕಗಿರಿ ಸಂಸ್ಥಾನದ ಗತವೈಭವ ನೆನಪಿಸುವಂತೆ ನಿರ್ಮಾಣವಾಗಿದ್ದ ಕನಕರಾಯ ವೇದಿಕೆಯಲ್ಲಿ ಎರಡು ದಿನ ನಡೆದ ಉತ್ಸವದಲ್ಲಿ ಕನ್ನಡ ನಾಡು, ನುಡಿಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಜನಪದಕಲೆಗಳ ಶ್ರೀಮಂತಿಕೆ ಅನಾವರಣಗೊಂಡಿತು. ಗಂಗಾವತಿ ಬೀಚಿ ಪ್ರಾಣೇಶ ಅವರ ನಗೆ ಹಬ್ಬ ಜನರನ್ನು ನಗೆಗಡಲಲ್ಲಿ ತೇಲಿಸಿತು. ಬೆಂಗಳೂರಿನ ವೈಜಯಂತಿ ಕಾಶಿ ಅವರ ತಂಡ ಪ್ರಸ್ತುತಪಡಿಸಿದ 'ಹಂಪಿ ನಗರಿಯ ತೆಂಕಣ ದಿಕ್ಕಿನ' ಎಂಬ ವಿಶೇಷ ನೃತ್ಯ ರೂಪಕ ಅಲ್ಲದೆ ಭರತ ನಾಟ್ಯ, ಕೂಚುಪುಡಿ, ಒಡಿಸ್ಸಿ ನೃತ್ಯಗಳ ಮಿಳಿತವನ್ನೊಳಗೊಂಡ 'ಸಮ್ಮಿಲನ' ನೃತ್ಯ ನೋಡುಗರ ಮನ ಸೂರೆಗೊಂಡಿತು. ವಿಜಯನಗರ ಸಾಮ್ರಾಜ್ಯದ ಗತಕಾಲದ ಕನಕಗಿರಿ ಸಂಸ್ಥಾನದ ಇತಿಹಾಸ ನೆನಪಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕನಕಗಿರಿ ಸಂಸ್ಥಾನದ ರಾಜಾ ಪರಸಪ್ಪ ನಾಯಕ, ರಾಜಾ ಉಡಚಪ್ಪ ನಾಯಕನ ಸಾಮ್ರಾಜ್ಯದಲ್ಲಿನ ವೈಭವ, ಕಲೆಗಳಿಗಿದ್ದ ಬೆಲೆ, ಭಕ್ತಿ-ಭಾವಗಳನ್ನು ತಮ್ಮ ರೂಪಕ ನೃತ್ಯದ ಮೂಲಕ ಜನರ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದರು. ಕನಕಗಿರಿಯ ಸರ್ಕಾರಿ ಕಾಲೇಜು ಆವರಣದಲ್ಲಿ ಎರಡು ದಿನ ಜರುಗಿದ ಕಬಡ್ಡಿ, ವಾಲಿಬಾಲ್, ಮಲ್ಲಕಂಬ, ಕುಸ್ತಿ ಸೇರಿದಂತೆ ನಾನಾ ಗ್ರಾಮೀಣ ಕ್ರೀಡೆಗಳು ನೋಡುಗರಲ್ಲಿ ಮೈ ನವಿರೇಳಿಸುವಲ್ಲಿ ಯಶಸ್ವಿಗೊಂಡವು. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ತಂಡದ 'ಸಿನಿಮಾ ಲಾಹಿರಿ' ಸಂಗೀತ ಮೋಡಿಗೆ ಜನರು ಕುಣಿದು ಕೇಕೆ ಹಾಕಿದರು. ಖ್ಯಾತ ಗಾಯಕ ಹೇಮಂತ್, ಲತಾ ಹಂಸಲೇಖಾ ಮುಂತಾದ ಗಾಯಕರ ಗಾಯನದ ಮೋಡಿಗೆ ಚಪ್ಪಾಳೆಗಳ ಸುರಿಮಳೆ ಲಭಿಸಿತು. ಹಂಸಲೇಖ ತಂಡದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯಕ್ಕೆ ಯುವಕರು ಹೆಜ್ಜೆ ಹಾಕಿ ಕುಣಿದರು. ಹಂಸಲೇಖರ ಹಲವು ಯುಗಳ ಗೀತೆಗಳು ಪ್ರೇಕ್ಷಕರ ಮನ ತಂಪಾಗಿಸಿದವು. ಹಂಸಲೇಖರ ಗೀತೆಗೆ ನೆರೆದ ಜನರು ಮಂತ್ರ ಮಗ್ದರಾಗಿ ತಲೆದೂಗಿದರು. ಎರಡು ದಿನಗಳ ಕಾಲ ನಡೆದ ಉತ್ಸವ ವಿಜಯನಗರ ಸಾಮ್ರಾಜ್ಯದ ಕೊಂಡಿಯಾದ ಕನಕಗಿರಿಯ ಗತ ವೈಭವವನ್ನು ಮರುಕಳಿಸುವ ಮೂಲಕ ಜನೋತ್ಸವವಾಗಿಸುವಲ್ಲಿ ಯಶಸ್ವಿಯಾಯಿತು. ಕನಕರಾಯ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿ ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಬರದ ಹಿನ್ನೆಲೆಯಲ್ಲಿ ಎರಡು ವರ್ಷ ಉತ್ಸವ ನಡೆದಿರಲಿಲ್ಲ. ಉತ್ಸವ ಆಚರಣೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಉತ್ಸವದಲ್ಲಿ ನಡೆದ ಸಣ್ಣ-ಪುಟ್ಟ ತಪ್ಮ್ಪಗಳಿಗೆ ಕ್ಷೇತ್ರದ ಜನರ ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮಾತನಾಡಿದರು. ಜಿಪಂ ಸದಸ್ಯ ಗಂಗಣ್ಣ ಸಮಗಂಡಿ, ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ತಾಪಂ ಸದಸ್ಯರಾದ ಹೊನ್ನೂರಸಾಬ್ ಚಿನ್ನೂರ, ಸರ್ವಮಂಗಳ ಭೂಸನೂರಮಠ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಆದಿಮನಿ, ಕನಕಗಿರಿ ಸಂಸ್ಥಾನದ ರಾಜವಂಶಸ್ಥರಾದ ಹುಲಿಹೈದರ್‌ದ ರಾಜಾ ನವೀನ್‌ಚಂದ್ರ ನಾಯಕ, ರಾಜಾ ವಿಜಯ ನಾಯಕ, ರಾಜಾ ಚಚ್ಚಪ್ಪ ನಾಯಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ