WEL COME TO KANAKAGIRI UTSAV 2013

ಶನಿವಾರ, ಫೆಬ್ರವರಿ 2, 2013

ಕನಕಗಿರಿ ಉತ್ಸವ : ಮಹಿಳೆಯರ ಕಬಡ್ಡಿಯಲ್ಲಿ ಬೆಂಗಳೂರು ಪ್ರಥಮ


ಐತಿಹಾಸಿಕ ಕನಕಗಿರಿ ಉತ್ಸವದ ಅಂಗವಾಗಿ ಕನಕಗಿರಿಯ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಅಮೃತಹಳ್ಳಿ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ಅತ್ಯಂತ ಕುತೂಹಲದಿಂದ ಕೂಡಿದ್ದ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಬೆಂಗಳೂರಿನ ಅಮೃತಹಳ್ಳಿ ತಂಡ ಕೇಸರಹಟ್ಟಿಯ ತಂಡದ ವಿರುದ್ಧ ಮೇಲುಗೈ ಸಾಧಿಸಿ, ಪ್ರಥಮ ಸ್ಥಾನ ಪಡೆದುಕೊಂಡಿತು. ಕೇಸರಹಟ್ಟಿಯ ಮಹಿಳಾ ಕಬಡ್ಡಿ ತಂಡ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆರಂಭದಿಂದಲೂ ಕುತೂಹಲ ಕಾಯ್ದುಕೊಂಡ ಈ ಪಂದ್ಯ ಅತ್ಯಂತ ರೋಚಕದಿಂದ ಕೂಡಿತ್ತು. ಕನಕಗಿರಿಯ ತಂಡ ಮೂರನೆ ಸ್ಥಾನ ಪಡೆದರೆ, ಕೊಪ್ಪಳದ ಕ್ರೀಡಾ ವಸತಿ ಶಾಲೆಯ ಮಹಿಳಾ ಕಬಡ್ಡಿ ತಂಡ ನಾಲ್ಕನೆ ಸ್ಥಾನ ಗಿಟ್ಟಿಸಿಕೊಂಡಿತು. ಪುರುಷರ ಕಬಡ್ಡಿ ಪಂದ್ಯಾಟಗಳು ಸಹ ನಡೆದಿದ್ದು, ಮೊದಲ ದಿನ ೮ ತಂಡಗಳುಕ್ವಾರ್ಟರ್ ಫೈನಲ್ ತಲುಪಿವೆ. ರಂಗೋಲಿ : ಕಾಲೇಜು ಕಟ್ಟಡದಲ್ಲಿ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಅತ್ಯಂತ ಆಕರ್ಷಕವಾಗಿತ್ತು. ಅತೀವ ಉತ್ಸಾಹದಿಂದ ಪಾಲ್ಗೊಂಡಿದ್ದ ನೀರೆಯರು, ಆಕರ್ಷಕ ರಂಗೋಲಿ ಬಿಡಿಸಿ, ತಮ್ಮ ಪ್ರತಿಭೆಯನ್ನು ಮೆರೆದರು. ರಂಗೋಲಿಯ ಚಿತ್ತಾರ ನೋಡುಗರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಹುಲಿಗಿಯ ಉಮಾ ಮಹೇಶ್ವರಿ ತಮ್ಮ ಅತ್ಯಾಕರ್ಷಕ ರಂಗೋಲಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. ಕಂಪ್ಲಿಯ ಮಂಜುಭಾರ್ಗವಿ ಎರಡನೆ ಸ್ಥಾನ ಪಡೆದರೆ, ಕನಕಗಿರಿಯ ಶಿಲ್ಪಾ ಕಂಬಳಿ- ಮೂರನೆ ಸ್ಥಾನ ಹಾಗೂ ಗಿರಿಜಾ ವಿರೂಪಾಕ್ಷಪ್ಪ ಅವರು ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಮೈ ನವಿರೇಳಿಸಿದ ಕುಸ್ತಿ : ಕನಕಗಿರಿಯ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯವನ್ನು ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಅವರು ಉದ್ಘಾಟಿಸಿದರು. ಕುಸ್ತಿ ಪಂದ್ಯದಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಮುಂಬೈ, ನಾಸಿಕ್, ಪೂನಾ, ರಾಜ್ಯದ ಶಿವಮೊಗ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಸಕ್ತಿಯಿಂದ ಆಗಮಿಸಿದ್ದರು. ಕುಸ್ತಿ ಪಂದ್ಯವನ್ನು ಕುಸ್ತಿ ಪಟುಗಳ ತೂಕಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳನ್ನು ನಿಗದಿಪಡಿಸಲಾಗಿತ್ತು. ಜಗಜ್ಜಟ್ಟಿಗಳಂತೆ ಕಾದಾಡಿದ ಕುಸ್ತಿ ಪಟುಗಳು, ತಮ್ಮ ಪಟ್ಟುಗಳ ಮೂಲಕ ನೋಡುಗರಲ್ಲಿ ರೋಮಾಂಚನ ಉಂಟುಮಾಡಿದರು. ವಿವಿಧ ವಿಭಾಗಗಳ ಕುಸ್ತಿ ಪಟುಗಳು ಪಂದ್ಯದ ಉಪಾಂತ್ಯವನ್ನು ತಲುಪಿವೆ. ಮಹಿಳೆಯರ ವಾಲಿಬಾಲ್ ಸ್ಪರ್ಧೆಯಲ್ಲಿ ಮೈಸೂರಿನ ಕ್ರೀಡಾ ವಸತಿ ಶಾಲೆಯ ತಂಡ ಮತ್ತು ಮಹಾರಾಷ್ಟ್ರ ರಾಜ್ಯದ ಪೂನಾದ ಮಹಿಳಾ ತಂಡ. ಖಾನಾಪುರ ತಾಲೂಕಿನ ಮಂಗಿನಕೊಪ್ಪ ಮತ್ತು ಹುಬ್ಬಳ್ಳಿಯ ಮಹಿಳಾ ವಾಲಿಬಾಲ್ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾದವು. ಆಕರ್ಷಕ ಮಲ್ಲಕಂಭ ಪ್ರದರ್ಶನ : ಮಲ್ಲಕಂಭ ಪ್ರದರ್ಶನಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಬಸರಿಹಾಳ, ಕಳಸ, ಶಿಗ್ಲಿ, ಆಡಲಕಟ್ಟೆ, ದಾವಣಗೆರೆ ಮುಂತಾದೆಡೆಗಳಿಂದ ಮಹಿಳೆಯರ ೧೦ ತಂಡ ಮತ್ತು ಪುರುಷರ೧೦ ತಂಡಗಳು ಆಗಮಿಸಿ, ಆಕರ್ಷಕ ಮಲ್ಲಕಂಭ ಪ್ರದರ್ಶನ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ