ಸೋಮವಾರ, ಜನವರಿ 21, 2013
ಫೆಬ್ರವರಿ ಮೊದಲ ವಾರದಲ್ಲಿ ಕನಕಗಿರಿ ಉತ್ಸವ-ತುಳಸಿ ಮದ್ದಿನೇನಿ
ಕೊಪ್ಪಳ ಜ : ಬರುವ ಫೆಬ್ರವರಿ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಿಂದ ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
ಕನಕಗಿರಿ ಉತ್ಸವ ಆಚರಣೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕಗಿರಿ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಉತ್ಸವಕ್ಕಾಗಿ ಸರ್ಕಾರ ಸದ್ಯ ೩೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಫೆಬ್ರವರಿ ಮೊದಲ ವಾರ ಅಂದರೆ ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದ್ದು, ಉತ್ಸವದ ಅಂಗವಾಗಿ ಪ್ರಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ಹಂಸಲೇಖ, ಗುರುಕಿರಣ್, ರಾಜೇಶ್ ಕೃಷ್ಣನ್, ಪ್ರಭಾತ್ ಕಲಾ ತಂಡ ಮುಂತಾದ ಕಲಾವಿದರ ಆಯ್ಕೆ ಬಗ್ಗೆ ಚರ್ಚಿಸಿ ನಂತರ ನಿರ್ಧರಿಸಲಾಗುವುದು. ರಾಷ್ಟ್ರ, ರಾಜ್ಯ ಮಟ್ಟದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಲೆ ಅನಾವರಣಕ್ಕೆ ನಿರ್ಧರಿಸಲಾಗಿದ್ದು, ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ಬಾರಿ ಉತ್ಸವವನ್ನು ಯಶಸ್ವಿಯನ್ನಾಗಿಸಲು ಜಿಲ್ಲಾ ಆಡಳಿತದೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳನ್ನೂ ಸಹ ವಿವಿಧ ಉಪ ಸಮಿತಿಗಳಲ್ಲಿ ಸೇರಿಸಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಉತ್ಸವದ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ, ಪುರುಷರಿಗೆ ಕುಸ್ತಿ ಪಂದ್ಯಾಟಗಳನ್ನು ನಡೆಸಲಾಗುವುದು. ಇವಲ್ಲದೆ, ಗ್ರಾಮೀಣ ಸೊಗಡಿನ ಕ್ರೀಡಾ ಸ್ಪರ್ಧೆಗಳು, ಕವಿಗೋಷ್ಠಿ, ವಿಚಾರಗೋಷ್ಠಿಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ. ಉತ್ಸವದ ಅಂಗವಾಗಿ ಪುಸ್ತಕ ಪ್ರದರ್ಶನ ಮೇಳ, ಪ್ರಶಸ್ತಿ ವಿಜೇತ ಮಕ್ಕಳು ರೂಪಿಸಿದ ವಿಜ್ಞಾನ ವಸ್ತುಪ್ರದರ್ಶನ, ರೈತರಿಗೆ ಅನುಕೂಲವಾಗುವಂತೆ ವಿವಿಧ ರಾಸುಗಳ ತಳಿ ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದ್ದು, ವಿವಿಧ ಜಿಲ್ಲೆಗಳ ಪ್ರಮುಖ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು. ಪುಸ್ತಕ ಪ್ರದರ್ಶನಕ್ಕೆ ಮುಂದಾಗುವ ಪ್ರಮುಖ ಪ್ರಕಾಶಕರಿಗೆ ಮಳಿಗೆ ಒದಗಿಸಲಾಗುವುದು. ಉತ್ಸವದ ವ್ಯಾಪಕ ಪ್ರಚಾರಕ್ಕಾಗಿ ಮಾಧ್ಯಮದವರಿಗಾಗಿ ಕನಕಗಿರಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
ಕನಕಗಿರಿ ಉತ್ಸವಕ್ಕೆ ಆಗಮಿಸುವ ಅತಿಥಿ ಗಣ್ಯರು, ಕಲಾವಿದರ ವಾಸ್ತವ್ಯಕ್ಕಾಗಿ ಗಂಗಾವತಿ ನಗರದ ಪ್ರಮುಖ ವಸತಿಗೃಹಗಳನ್ನು ಕಾಯ್ದಿರಿಸಲು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ಮಾತನಾಡಿ, ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಸಹಕಾರ ನೀಡಲಾಗುವುದು. ಉತ್ಸವದ ಅಂಗವಾಗಿ ಕನಕಗಿರಿಯ ಪ್ರಮುಖ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು. ಉತ್ಸವದ ಸಂದರ್ಭದಲ್ಲಿ ಕನಕಗಿರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಕನಕಗಿರಿಯ ಪ್ರಮುಖ ರಸ್ತೆಗಳು, ಬೀದಿ ದೀಪಗಳನ್ನು ಸಮರ್ಪಕಗೊಳಿಸುವ ಮೂಲಕ ಸಜ್ಜುಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಕನಕಗಿರಿ ಉತ್ಸವ ಸಂದರ್ಭದಲ್ಲಿ ಎರಡು ದಿನಗಳ ಊಟದ ವ್ಯವಸ್ಥೆ ಹಾಗೂ ಖರ್ಚು ವೆಚ್ಚವನ್ನು ತಾವೇ ವಹಿಸಿಕೊಳ್ಳುವುದಾಗಿ ಶಾಸಕ ಶಿವರಾಜ ತಂಗಡಗಿ ಅವರು ಭರವಸೆ ನೀಡಿದರು.
ಕನಕಗಿರಿ ಉತ್ಸವವನ್ನು ಯಶಸ್ವಿಯನ್ನಾಗಿಸಲು ವೇದಿಕೆ, ಸಾಂಸ್ಕೃತಿಕ, ಆಹಾರ, ವಸತಿ, ಕ್ರೀಡೆ, ಮೆರವಣಿಗೆ, ಮಾಧ್ಯಮ, ಭದ್ರತೆ, ಆರೋಗ್ಯ ಮುಂತಾದ ಉಪಸಮಿತಿಗಳನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಜ. ೧೫ ರಂದು ಮಧ್ಯಾಹ್ನ ೨ ಗಂಟೆಗೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ್, ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಕಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನಕಗಿರಿ ಭಾಗದ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ