WEL COME TO KANAKAGIRI UTSAV 2013

ಶುಕ್ರವಾರ, ಫೆಬ್ರವರಿ 12, 2010

ಕನಕಗಿರಿ ಉತ್ಸವ 2010 ಪೂರ್ವ ಸಿದ್ದತೆಗಳು



ಕೊಪ್ಪಳ ಫೆ. : ಇತಿಹಾಸ ಪ್ರಸಿದ್ಧವಾಗಿರುವ ಕನಕಗಿರಿ ಉತ್ಸವವನ್ನು ಫೆ. ೨೩ ಮತ್ತು ೨೩ ರಂದು ಎರಡು ದಿನಗಳ ಕಾಲ ವಿಜೃಂಭಣೆಂದ ನಡೆಸಲಾಗುವುದು ಎಂದು ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಕಲ್ಯಾಣಮಂಟಪದಲ್ಲಿ ಏರ್ಪಡಿಸಲಾಗಿದ್ದ ಕನಕಗಿರಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು.

ಇತಿಹಾಸ ಪ್ರಸಿದ್ಧವಾಗಿರುವ ಕನಕಗಿರಿಯಲ್ಲಿ "ಕನಕಗಿರಿ ಉತ್ಸವ" ನಡೆಸಲು ಸರ್ಕಾರ ಕಳೆದ ವರ್ಷವೇ ತೀರ್ಮಾನಿಸಿ, ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿತ್ತು. ಚುನಾವಣೆ ಮತ್ತು ಆನೆಗುಂದಿ ಸೇತುವೆ ದುರಂತದಿಂದಾಗಿ ಕೊನೆ ಘಳಿಗೆಯಲ್ಲಿ ಉತ್ಸವ ನಡೆಸುವುದನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾತು. ಈ ವರ್ಷ ಮತ್ತೆ ಕನಕಗಿರಿ ಉತ್ಸವ ನಡೆಸಲು ಈ ಭಾಗದ ಜನ ಉತ್ಸುಕರಾಗಿದ್ದು, ಅವರ ಕೋರಿಕೆಯನ್ನು ಮನ್ನಿಸಿ ಕನಕಗಿರಿ ಉತ್ಸವ ನಡೆಸಲು ರಾಜ್ಯ ಸರ್ಕಾರ ೦೧ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ ಸಲುವಾಗಿ ಕನಕಗಿರಿಯಲ್ಲಿ ಉತ್ಸವ ನಡೆಸುವುದು ಬಹು ಮಹತ್ವಪೂರ್ಣವಾಗಿದೆ. ಜಿಲ್ಲಾಡಳಿತ ಕೂಡ ಈ ದಿಸೆಯಲ್ಲಿ ಉತ್ಸವ ನಡೆಸಲು ಸನ್ನದ್ಧವಾಗಿದೆ. ಫೆ. ೨೨, ೨೩ ರಂದು ಎರಡು ದಿನಗಳ ಕಾಲ ಉತ್ಸವ ನಡೆಸಲು ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಇಂದಿನಿಂದಲೇ ನಡೆಸಲು ಕಾರ್ಯೋನ್ಮುಖರಾಗಿದ್ದಾರೆ. ಸಮಯ ಬಹಳ ಕಡಿಮೆ ಇರುವುದರಿಂದ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ರಾಜ್ಯ ಮಟ್ಟದ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು. ಫೆ. ೨೨ ರಂದು ಉತ್ಸವದ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗುವುದು. ಮುಖ್ಯಮಂತ್ರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದ್ದಾರೆ. ಉತ್ಸವದ ದಿನಾಂಕಗಳನ್ನು ಯಾವುದೇ ಕಾರಣಕ್ಕೂ ಮುಂದೂಡಲಾಗುವುದಿಲ್ಲ. ಮುಂದೆ ಗ್ರಾಮಪಂಚಾಯತಿ ಚುನಾವಣೆ ಬರುವ ಸಾಧ್ಯತೆ ಇರುವುದರಿಂದ ನಿಗದಿಪಡಿಸಿದ ದಿನಾಂಕದಲ್ಲಿಯೇ ಉತ್ಸವ ನಡೆಸಲು ಸರ್ವ ಜನರೂ ಸಹಕರಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.

ಕನಕಗಿರಿ ಉತ್ಸವವನ್ನು ಯಶಸ್ವಿಗೊಳಿಸಲು ೧೮ ಉಪಸಮಿತಿಗಳನ್ನು ರಚಿಸಲಾಗಿದೆ. ಮುಖ್ಯವಾಗಿ ಸ್ವಾಗತ, ಸಾಂಸ್ಕೃತಿಕ, ವೇದಿಕೆ ನಿರ್ಮಾಣ, ಆಹಾರ, ಕ್ರೀಡೆ, ವಸತಿ, ಸಾರಿಗೆ, ಮೆರವಣಿಗೆ, ಆರೋಗ್ಯ, ಭದ್ರತೆ, ಪ್ರಚಾರ, ಮೂಲಭೂತ ಸೌಕರ್ಯ, ಕುಡಿಯುವ ನೀರು, ನೈರ್ಮಲೀಕರಣ, ವಸ್ತುಪ್ರದರ್ಶನ ಮತ್ತು ಸ್ತಬ್ಧ ಚಿತ್ರ, ಹಣಕಾಸು ಮತ್ತು ಲೆಕ್ಕಪತ್ರ, ಹಾಗೂ ಸಂಘಟನಾ ಸಮಿತಿಗಳನ್ನು ರಚಿಸಿ, ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರುಗಳನ್ನು ನೇಮಿಸಲಾಗಿದೆ. ಪ್ರತಿಯೊಂದು ಉಪಸಮಿತಿಯು ಸಭೆ ಸೇರಿ, ಉತ್ಸವದ ಯಶಸ್ವಿಗೆ ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿ, ಸಭೆಯ ವಿವರಗಳ ನಡವಳಿಗಳನ್ನು ಕೂಡಲೆ ಸಲ್ಲಿಸಬೇಕು. ಉತ್ಸವದ ವೇದಿಕೆ ಹಾಗೂ ಊರಿನಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯಾ ಸಮಿತಿಯವರು ಕೂಡಲೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ಸವ ನಡೆಸಲು ಕೃ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವರಾಜ್ ತಂಗಡಗಿ ಅವರು ಎಲ್ಲ ವ್ಯವಸ್ಥೆಗಳನ್ನು ಈಗಾಗಲೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಅವರ ಜೊತೆಗೆ ನಿಂತು ಸಹಕರಿಸಿ ಉತ್ಸವದ ಯಶಸ್ವಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಸಂಸದ ಶಿವರಾಮಗೌಡ ಅವರು ಮನವಿ ಮಾಡಿಕೊಂಡರು.ಉತ್ಸವ ನಡೆಸಲು ಕಾಲಾವಧಿ ಕಡಿಮೆ ಇರುವುದರಿಂದ ಕನಕಗಿರಿಯ ರಹವಾಸಿಗಳು ತಮ್ಮ ಮನೆಯ ಮುಂದೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ಗ್ರಾಮ ಸ್ವಚ್ಛ ಮಾಡಿದಂತಾಗುತ್ತದೆ. ಅಧಿಕಾರಿಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಅವರ ಜೊತೆಗೆ ತಾವೂ ಸಹಕರಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಟನಿ ಮೆಂಡೋನ್ಸ ಅವರು ಹೇಳಿದರು.ಸಭೆಯಲ್ಲಿ ಜಿ.ಪಂ. ಸದಸ್ಯೆ ಸವಿತಾ ಕಲುಬಾಗಿಲ ಮಠ, ಗ್ರಾ.ಪಂ. ಅಧ್ಯಕ್ಷ ದೇವಪ್ಪ ತೋಳದ, ಉಪಾಧ್ಯಕ್ಷೆ ಹೊನ್ನಮ್ಮ ನಾಯಕ್, ಅಪರ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್, ಸಹಾಯಕ ಆಯುಕ್ತ ಜಿ.ಕೆ. ನಾಗೇಂದ್ರಪ್ಪ, ಅಲ್ಲದೆ ಊರಿನ ಹಿರಿಯರು, ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ