WEL COME TO KANAKAGIRI UTSAV 2013

ಮಂಗಳವಾರ, ಫೆಬ್ರವರಿ 23, 2010

ನಾಡಿನ ಐಕ್ಯಮತ್ಯ ಕಾಪಾಡಲು ಉತ್ಸವಗಳು ಬೇಕು- ಜಗದೀಶ್ ಶೆಟ್ಟರ್

: ನಾಡಿನ ಐಕ್ಯಮತ್ಯ ಕಾಪಾಡಲು ಉತ್ಸವಗಳಂತಹ ಕಾರ್ಯಕ್ರಮಗಳನ್ನು ಆಚರಿಸುವುದು ಅಗತ್ಯವಾಗಿದ್ದು, ಉತ್ಸವಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಪರಂಪರೆಗಳನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರು ಅಭಿಪ್ರಾಯಪಟ್ಟರು.
ಫೆ. ೨೨ ಮತ್ತು ೨೩ ರಂದು ಎರಡು ದಿನಗಳ ಕಾಲ ವೈಭವದಿಂದ ಜರುಗಿದ ಕನಕಗಿರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಇಂದು ಅವರು ಮಾತನಾಡುತ್ತಿದ್ದರು.
ಇಂದಿನ ವಿದ್ಯಾರ್ಥಿಗಳು ಇತಿಹಾಸ ತಿಳಿದುಕೊಳ್ಳುವತ್ತ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂಗತಿ ಕಳವಳಕಾರಿಯಾಗಿದ್ದು, ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ಪ್ರಸಿದ್ಧ ನಾಯಕರ ಆದರ್ಶದ ಅರಿವನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ ಕಾರ್ಯ ಆಗಬೇಕಾಗಿದೆ. ಐತಿಹಾಸಿಕ ಕುರುಹುಗಳು, ಶಿಲ್ಪಕಲೆ ಹಾಗೂ ದೇಶದ ಭವ್ಯ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಉತ್ಸವದಂತಹ ಕಾರ್ಯಕ್ರಮಗಳು ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕನಕಗಿರಿ ಉತ್ಸವಕ್ಕೆ ಜನಸಾಗರವೇ ಹರಿದುಬಂದದ್ದನ್ನು ನೋಡಿ ಹರ್ಷಚಿತ್ತರಾಗಿ ನುಡಿದ ಸಚಿವರು ಎಲ್ಲ ಉತ್ಸವಗಳನ್ನು ಮೀರಿದಂತೆ ಜನಸಾಗರ ಇಲ್ಲಿ ನೆರೆದಿದೆ. ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ದೊರೆ ಶ್ರೀಕೃಷ್ಣದೇವರಾಯ ಹಾಗೂ ಪರಾಕ್ರಮಿ ಗಂಡುಗಲಿ ಕುಮಾರರಾಮನಂತಹ ಆದರ್ಶ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದಂತಹ ಕನಕಗಿರಿಯನ್ನು ಆಳಿದ ಉಡಚಪ್ಪ ನಾಯಕರಂತಹವರು ನಿಜಕ್ಕೂ ದಕ್ಷ ಆಡಳಿತಗಾರರಾಗಿದ್ದರು ಎಂಬುದನ್ನು ಇತಿಹಾಸ ಬಿಂಬಿಸಿದೆ. ಇಂತಹ ಭವ್ಯ ಇತಿಹಾಸವನ್ನು ಹೊಂದಿರುವ ಕನಕಗಿರಿಯನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಭವ್ಯ ಇತಿಹಾಸವನ್ನು ನೆನಪಿಸಿಕೊಳ್ಳಬೇಕಾಗಿರುವುದು ಯುವಕರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಕನಕಗಿರಿ ಉತ್ಸವದಲ್ಲಿ ಸಚಿವ ಜಾರಕಿಹೊಳಿ ಕೊಡುಗೆ : ಕನಕಗಿರಿ ಹಾಗೂ ಕಾರಟಗಿ ಗ್ರಾಮಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಬಜೆಟ್ ಮಂಡನೆಯ ನಂತರ ಸಚಿವ ಸಂಪುಟ ಸಬೆಯಲ್ಲಿ ಮಂಡಿಸಿ ನಂತರ ಈ ಕುರಿತ ಆದೇಶವನ್ನು ಹೊರಡಿಸಲಾಗುವುದು. ಇದು ಕನಕಗಿರಿ ಉತ್ಸವದ ಅಂಗವಾಗಿ ಸರ್ಕಾರ ನೀಡಿದ ಕೊಡುಗೆಯಾಗಿದೆ ಎಂದು ರಾಜ್ಯ ಪೌರಾಳಿತ ಮತ್ತು ಸ್ಥಳೀಯ ಸಂಸ್ಥೆ ಖಾತೆ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಬಣ್ಣಿಸಿದರು. ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಹಾಗೂ ಜನೋತ್ಸವವಾಗಿ ಆಚರಿಸುವಲ್ಲಿ ಕಾರಣೀಭೂತರಾದ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ರಾಜ್ಯ ಕೃಷಿಮಾರುಕಟ್ಟೆ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಅಭಿನಂದನಾರ್ಹರು ಎಂದು ಅವರು ಅಭಿಪ್ರಾಯಪಟ್ಟರು.
ಕನಕಗಿರಿ ಉತ್ಸವದ ಸಮಾರೋಪ ಸಮಾರಂಭ ಕುರಿತು ರಾಜ್ಯ ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಸಚಿವ ನರೇಂದ್ರಸ್ವಾಮಿ, ರಾಜ್ಯ ಲಾಟರಿ ಮತ್ತು ಸಣ್ಣ ಉಳಿತಾಯ. ಲೋಕಶಿಕ್ಷಣ ಹಾಗೂ ಗ್ರಂಥಾಲಯ ಖಾತೆ ಸಚಿವ ಶಿವನಗೌಡ ನಾಯಕ, ಯುವಜನ ಸೇವಾ ಮತ್ತು ಕ್ರೀಡಾ ಹಾಗೂ ಜವಳಿ ಖಾತೆ ಸಚಿವ ಗೂಳಿಹಟ್ಟಿ ಶೇಖರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಬಿ. ಬಸವರಾಜಪ್ಪ, ಮುಂತಾದ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಟನಿ ಮೆಂಡೋನ್ಸ ಅವರು ಪ್ರಾರಂಭದಲ್ಲಿ ಸ್ವಾಗತಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ